Pages

Saturday, September 27, 2014

ನನ್ನದೊಂದು ನಶೆ.... !!!

ನಾ ಕುಡಿದಿಲ್ಲ ಕುಡಿಯಲ್ಲ ,
ನಿನ್ನ ನಶೆಯನ್ನು ಮದಿರೆಗೆ ಹೋಲಿಸಿದರೆ
ಹಸಿ ಹಸಿ ಸುಳ್ಳಾದೀತು
ನನ್ನೊಳಗಿನ ನಶೆಯ ಅಗುಲಿನ ಹರಿತ
ಅನುಭವಿಸಲಾಗದವಳಿಗೆ
ಶಬ್ಧಗಳೇನು ಹೇಳುವುದು ಮಣ್ಣು?

ಗಿಜಿಗಿಜಿ ಜನಜಂಗುಳಿಯೊಳು
ನಿನ್ನ ನೆನೆತರೆ ನಶೆಗೆ ಅಪಮಾನ
ಏಕಾಂತದ ಕಡು ಮೌನದೊಳು ಮಾತ್ರ
ನಿನ್ನ ನಶೆಯನ್ನು ಮೆದುಳು ಹ್ರದಯದ
ಇಂಚಿಂಚಲಿ ಅನುಭವಿಸಬಲ್ಲೆ.
ನಿನ್ನ ನಶೆಯೇರಿಸಿ ಕುಳಿತ ನನ್ನ ಕಡಿದರೆ
ಕಾಳಿಂಗ ಸರ್ಪಕ್ಕೂ ಸಾವು ಖಚಿತ.

ಮದಿರೆಯನ್ನು ಹೊಗಳಿ ನಡೆಯುವವನಿಗೆ ಕೇಳಿಸಿಬಿಟ್ಟರೆ ಭಯ
ನನ್ನ ನಶೆಯೊಳು ಪಾಲು ಕೇಳಿಯಾನು
ನೀಡದಿದ್ದರೆ ಕುತ್ತಿಗೆ ಹಿಸುಕಿ ಅಪಹರಿಸಿಯಾನು
ಮದಿರೆ ನಶೆಯೆಂಬುದು ಸುಳ್ಳೆಂದು
ಬೊಬ್ಬಿರಿದು ಪ್ರಮಾಣ ಮಾಡಿಯಾನು

ಚಂದಿರನೂ ಪುಸಲಾಯಿಸಲಿಲ್ಲವೇ
ಕಾಳ ರಾತ್ರಿಯ ಪಶ್ಚಿಮದ ಕ್ರೂರ ಗಾಳಿಯ ಜೊತೆಗೂಡಿ??
ನಶೆಯನ್ನು ವರ್ಗಾಯಿಸಿ ಬಿಡು ಎನಗೆ
ನೂರಾರು ಕಾಲಕ್ಕೂ ಋಣಿಯಾಗುವೆನೆಂದು...
ಉರಿದು ಕರಗುತಿದ್ದ ಮೇಣದ ಬತ್ತಿಗಳೇ ಸಾಕ್ಷಿ,
ಹರಿದು ಬಿಸುಟ ಕಣ್ಣೀರಲಿ ನೆನೆದ ಹಾಳೆಗಳೇ ಸಾಕ್ಷಿ ...
ಬಿಕ್ಕಳಿಕೆಯ ತಡೆಯಲೆತ್ನಿಸಿದ ಅಂಗೈಯೇ ಸಾಕ್ಷಿ...

ಗೋರ್ಗಲ್ಲಿನಂತ ನಿನ್ನೆದೆಗೆ ತಲುಪದ
ಅಕ್ಷರಗಳಿಗ್ಯಾವ ಅರ್ಹತೆ
ನನ್ನೊಳಗಿನ ನಶೆಯ ಕಾಠಿನ್ಯ ವರ್ಣಿಸಲು...
ಶಬ್ಧಗಳಿಗೆ ಧೈರ್ಯವಿದ್ದರೆ ಬಾಜಿ ಕಟ್ಟುವೆ,
ವರ್ಣಿಸದು ಜನ್ಮದಲ್ಲೆಂದೂ
ಅರ್ಥೈಸಿಕೊಳ್ಳಬಲ್ಲೆನೆಂಬವನು ಮಹಾ ಸುಳ್ಳ
ನನ್ನವಳ ದ್ರೋಹವರಿಯದವನು.

-ಕಂದ

No comments:

Post a Comment