Pages

Thursday, September 25, 2014

ಅಮ್ಮ ನೆನಪಾಗುವ ಹೊತ್ತು

ಏನೆಲ್ಲ ಬರೀತೀನಿ
ನಿನ್ ಬಗ್ಗೆ ಬರೆಯಲ್ಲ
ನೀನನ್ನ ಕೇಳಲ್ಲವೆಂಬ
ಅಸಡ್ಡೆಯಲ್ವಾ ನಂಗೆ.. ??
ಹಃ ಹಃ ಅಮ್ಮಾ..
ನೆನ್ನೇನು ಹೇಳ್ದ್ಯಂತೆ ನಮ್ಮಪ್ಪನಿಗೆ,
ನಾ ನಿಂಗೆ ಫೋನು ಮಾಡಿದ್ದೆನಂತ
ಎಂತ ಸುಳ್ಳುಗಾತಿ ನೀನು?
ಹಃ ಹಃ ಹಃ
ಅದಿರಲಿ
ಮನೆ ಬದಿಯ ಓಣಿಯಲಿ
ನಾ ಬೀಡಿ ಹಚ್ಚಿದ್ದು
ನೀ ಹೇಳಿಲ್ಲವಂತೆ ಅಪ್ಪನಿಗೆ?
ನಾ ಸರಿಯಾಗುವೆನೆಂಬ ವಿಶ್ವಾಸವಿತ್ತಾ?
ನೀ ಕಾಸು ಕೊಡದಾಗ ಹುಡುಕಾಡಿ ಸಿಗದಾಗ
ನಾ ಕನ್ನಡಿಗೆ ಬಡಿದಿದ್ದು ಬೆಕ್ಕಿನ ತಪ್ಪೆಂದು
ಹೆಂಚುಗಳ ಒಡೆದಿದ್ದು ತೆಂಗಿನಮರವೆಂದು
ಊಸಿ ಬಿಟ್ಟಿದ್ಯಂತೆ,ಅಪ್ಪ ನಂಬಿದ್ರಂತೆ,
ನಿನಗೊಂಚೂರೂ ಮನಸಾಕ್ಷಿಯಿಲ್ವ?
ಜ್ವರ ಬಂದು ಅತ್ತಾಗ ಪ್ರಜ್ನೆಯಿಲ್ಲದೆ ಬಿದ್ದಾಗ
ಇರುಳೆಲ್ಲ ತಲೆ ಹತ್ರ ಕೂತ್ಬಿಟ್ಟು ಗಳಾ ಗಳಾ ಅಳ್ತಿದ್ದೆ
ಕಣ್ಣೀರು ಮುಖಕ್ ಬಿದ್ದು ಕಿರಿಕಿರಿಯಾಗಿತ್ತು
ನಿನಗೇನು ನಿದ್ರೆಯೆಂದರೆ ಅಲರ್ಜಿಯಾ?
ಊರ್ ಸುತ್ತೋಕೆ ಹೊರಟೋಣ
ಬಾಗಿಲಲಿ ಕಾದಿದ್ದು, ರಸ್ತೇಲಿ ಇಣುಕಿದ್ದು
ಅದೂ ನಡುರಾತ್ರಿಯಲ್ಲಿ ...!!!!???
ಅಬ್ಬಾ ನಿನಗೆಷ್ಟು ಧೈರ್ಯ????!!!!
ದನದಂತೆ ನನ್ನ ಬಡಿವಾಗ ಅಪ್ಪ
ಮೈಯೊಡ್ಡಿ ನಿಲ್ತಿದ್ದೆ ಅಪ್ಪನಲಿ ಬೇಡ್ತಿದ್ದೆ
ನಿನೇನು ಸೂಪರ್ ವುಮೆನ???
ನೋವಾಗ್ತಿರ್ಲಿಲ್ವಾ ಒಂಚೂರೂ ನಿನಗೆ?
ಅದೆಲ್ಲಾ ಇರಲಿ,
ಒಂದೇ ತುಂಡೆಂದು ನಾ ಅರಚಾಡಿ ಹೊರಟಾಗ
ತಡೆದ್ಬಿಟ್ಟು ಕೊಟ್ಟಿದ್ದು ನಿನ್ಪಾಲಿನದ್ದಾ?
ನಿದ್ರೆಯಿಂದ ಎಬ್ಬಿಸಿ ಬಲವಂತದಿ ಉಣಿಸಿದ್ದು
ನಿನ ಜೀವಬಲಕೆ ತಣ್ಣೀರು ಕುಡಿದಾ?
ಹೋಗು ಇಷ್ಟೇನಾ ಬರೆಯೋದೂಂತ
ತಲೆನೇವರಿಸೋಕೆ ಬರ್ಬೇಡ...
ಒದ್ದೆ ಹಾಳೆಯಲಿ ಲೇಖನಿಯು ಚಲಿಸಲ್ಲ …!!!!
-ನಿನ್ನ ಕಂದ 

1 comment:

  1. ಅಮ್ಮನೆಂದರೆ ಅಮ್ಮ ಅಷ್ಟೇ.........
    ಚಂದದ ಭಾವ ಬರಹ.....

    ReplyDelete