Pages

Monday, September 29, 2014

ನಿನ್ನ ಅಂದದಿಂದ ಕದ್ದ ಪದಗಳು..!!

ನಾ ಕವಿಯಲ್ಲ ಮಣ್ಣು
ಎಲ್ಲವೂ ನಿನ್ನ ಅಂದದಿಂದ
ಕದ್ದ ಪದಗಳು
~~
ಹೊಳೆದ ಭಾವಗಳು
ಅಕ್ಷರವಾಗದಾಗ
'ಹನಿ'ಯ ಭ್ರೂಣ ಹತ್ಯೆ
~~
ಮರೆತ ನೆನಪುಗಳಿಗೆ
ನೀರುಣಿಸಿ ಚಿಗುರಿಸುವ
ಮಳೆಯು ಮಹಾ ಕ್ರೂರಿ
~~
ಹರಿವ ಮಳೆನೀರಲಿ
ನೆನೆದ ನನ್ನೆದೆಯ ಭಾವವಿದೆ
ಮೆಟ್ಟಿಳಿಲಿದು ಬಾ
ಪಾದಗಳ ಸೋಕಲಿ ಸಾಕು
ನನ್ನ ನೋವು  ಸಾರ್ಥಕ.
~~
ಮಳೆ ಮುಗಿದ ಮೇಲೆ
ಸವಾರಿ ಹೊರಡುವೆ
ನಿನ್ನ ನೆನಪುಗಳು ದಾರಿಯುದ್ದಕೂ
ಹನಿಯಾಗುತ್ತದೆ
ಹುಲ್ಲುಹಾಸುಗಳ ಮೇಲೆ....
~~
ಅಹುದು ಪುನರಾವರ್ತಿತ
ಮರೆತ ನೆನಪುಗಳಿಗೆ
ನೀರುಣಿಸಿ ಚಿಗುರಿಸುವ
ಮಳೆಯು ಮಹಾ ಕ್ರೂರಿ

-ಕಂದ .

Sunday, September 28, 2014

ಅರ್ಥವಾಗದು

ನನಗೇನೋ ಆಸೆಗಳಿವೆ,ಇತ್ತು
ಇರಬಹುದು, ಇರಲಾರದು
ಹೊರೆತಾಗಿಯೂ ನಾನೆಲ್ಲೂ
ಬೇಡಿಕೆಯನಿಟ್ಟಿಲ್ಲ ಇಡಲಾರೆ
ಜಗತ್ತಿಗೆ ನೂರಾರು ತಲೆಬಿಸಿಗಳಿವೆ
ನನ್ನೊಳಗಿನ ಬಯಕೆಗಳಿಗೆ
ಉಪವಾಸ ಕಲಿಸಿರುವೆ ಬಲವಂತವಾಗಿ.

ನಟಿಸೋಕ್ಕೆ ಬರಲೊದ್ದು ನಟಿಸುವೆನು
ಉಸಿರನ್ನು ಕೊಲ್ಲುವುದು ತಪ್ಪಂತೆ
ನಟನೆಯಲಿ ಉಸಿರುಕಟ್ಟುವಾಗ ಇರುಳಾಗುತ್ತದೆ
ಏಕಾಂತದ ಕುಲುಮೆಗಳು ನನ್ನ ಕಾದಿರುತ್ತದೆ
ಬೆದರುತ್ತಲೇ ಇಳಿದುಬಿಡುತ್ತೇನೆ,ಬೇಯಲು..
ವಿಲವಿಲ ಒದ್ದಾಟ ನಿಮಗೆ ಹಿಡಿಸದು
ಮುಚ್ಚಿಬಿಡಿ ಲೋಕದ ಕದ,ಇಲ್ಲಿ ನಟನೆಯಿಲ್ಲ

ತಪ್ಪುಗಳು ಒಮ್ಮೆಯೇ ನಡೆದದ್ದು
ಶಿಕ್ಷೆ ನಿತ್ಯವೂ ಪುನರಾವರ್ತಿತ,ಇಲ್ಲಿ ನ್ಯಾಯವಿಲ್ಲ
ಬರೆಯ ನೋವು,ಚೀರಾಟ,ಉರಿ,ಕೀವು
ಕೈ ಮುಗಿದು ಬೇಡುವ ಕರುಣಾಜನಕ ಸ್ಥಿತಿಗಳು
ಸಹಾಯ ಸಾಂತ್ವನವಿಲ್ಲ,ಮೊರೆಯೆಲ್ಲ ವ್ಯರ್ಥ
ಮುಗ್ಧವಾಗಿ ಸ್ವೀಕರಿಸುವುದು ಭೀಕರ ಹೊಡೆತಗಳ ತಡೆಯಲಾಗದಾಗ ಹೊರಳಾಡುವುದು,ಅಳುವುದು ಪ್ರಜ್ಙೆಗೆಡುವುದು,

ನಟನೆ ಗರಿಗೆದರುವ ಹೊತ್ತಿಗೆ ಮತ್ತೆ ಸಿದ್ಧ
ಕುಲುಮೆಯಿಂದೆದ್ದ ಕುರುಹುಗಳ ಅಡಗಿಸಿಟ್ಟಿರುವೆ
ಕಂಡರೆ ಮೂಗುಮುರಿಯುತ್ತೀರ,
ಮತ್ತೊಂದು ಶಿಕ್ಷೆ ನೀಡುವುದ ನೆನೆದರೆ ಭಯವಿದೆ
ಚಾಣಾಕ್ಷನಾಗುವೆನು ನಟನೆ ನೈಜವಾಗಿ ಕಾಣಲು
ಸೋಲಿಸದೆ ಸಹಕರಿಸಬೇಕು ಇದ್ದ ಜಗದವರು
ನನ್ನೊಳಗಿನ ಬಯಕೆಗಳಿಗೆ ಉಪವಾಸ ಕಲಿಸಿರುವೆ ಬಲವಂತವಾಗಿ

-ಕಂದ



Saturday, September 27, 2014

ಉಫ್ಫ್

೧೯೪೭ರಂದು
ಸ್ವರಾಜ್ಯ ಉದಯವಾಯಿತಂತೆ.

ಖಾದಿ ತೊಟ್ಟು ಲೂಟುವವರಿಗೆ,
ಖಾಖಿ ತೊಟ್ಟು ಕೊಲ್ಲುವವರಿಗೆ,
ಖಾವಿ ತೊಟ್ಟು ಬೆದರಿಸುವವರಿಗೆ,

ಮಿಕ್ಕವರು ಯಾರದೋ ಸ್ವರಾಜ್ಯಕ್ಕೆ
ಪ್ರಾಣ ಕೊಟ್ಟ ಮುಠ್ಠಾಳರ,
ಅಳಿದುಳಿದ ಮಕ್ಕಳು. !!!

ನಾ ಕವಿಯಲ್ಲ....

ಇಲ್ಲ ನಾ ಫೇಸ್ಬುಕ್ ಕವಿಯಲ್ಲ

ಅಮ್ಮ ಕೋಪಿಸಿಕೊಂಡರೆ
ದೂರದ ಬೋಳುಗುಡ್ಡೆಯಲಿ
ಹೆಸರರಿಯದ ಮರದಡಿಯಲಿ ಕುಳಿತು
ಕಲ್ಲುಗಳೊಂದಿಗೆ ಜಗಳವಾಡುವ ಮಗ.

ನನ್ನವಳು ಮುನಿಸಿಕೊಂಡರೆ
ನನ್ನೂರ ನದಿ ದಂಡೆಯಲಿ ಕುಳಿತು
ಮರಳುಗಳಿಗೆ ಕಣ್ಣೀರು ಬೆರೆಸುವ
ಮುಗ್ಧ ಪ್ರೇಮಿ.

ನ್ಯಾಯವು ಕೊಲ್ಲಲ್ಪಡುತ್ತಿದ್ದರೆ
ಕತ್ತಿಯ ಅಗುಲಿಗೆ ಅಕ್ಷರಗಳ ಅಡ್ಡವಿಟ್ಟು
ತಡೆಯಲು ಯತ್ನಿಸುವ ಮನುಷ್ಯ ಜೀವಿ.

ಇಲ್ಲ ನಾ ಕವಿಯೇ ಅಲ್ಲ.
ನಾ ಭಾವನೆಗಳ ತಡೆಹಿಡಿಯಲಾಗದ
ದುರ್ಬಲ ಜೀವಿ.
-ಕಂದ

ನನ್ನ ದೇಶ...

ನನ್ನ ದೇಶ ಹಿಂದುಳಿಯಲು ಕಾರಣ
ಬಳಕೆಯಾಗದೆ ಗುಜರಿಗೆ ಬಿದ್ದ ಪ್ರತಿಭೆಗಳು

ಬಿಕರಿಗಿಲ್ಲ....

ಲೈಕುಗಳಿಗೆ ಬಿಕರಿಗಿಡಲು
ಪುಕ್ಕಟೆ ಪದಗಳಲ್ಲ ನನ್ನ ಕವನ.

ಗುಂಡಿಗೆ ಬಗೆದ ನೋವುಗಳ
ಹಿಂಡಿ ತೆಗೆದ ಅಕ್ಷರಗಳ ಕಥನ.

-ಕಂದ.

ಹುಚ್ಚು ಬಿಡಬೇಕಿದೆ....!!!!

ಅಪಥ್ಯವಾದರೆ ಆಚೆ ತಳ್ಳಿ ಬಿಡಿ!!

ನಿನ್ನ ಅಭಿಪ್ರಾಯಕ್ಕಿಷ್ಟು ಮಣ್ಣು  ಹಾಕು
ಮೊದಲು ನಿನ್ನ ಧರ್ಮ ಹೇಳು
ಅದಕ್ಕನುಸಾರವೇ ನಿನ್ನ ಅಭಿಪ್ರಾಯವ ಆಲಿಸುವುದು

ನಿನ್ನ ಸಾಮಾಜಿಕ ಕಳಕಳಿ ಬದಿಗಿರಲಿ
ನಿನಗೆ 'ದೊಡ್ಡವರ' ಬೆಂಬಲವಿದೆಯಾ?
ಅದೇ ನಿನ್ನ ಕಳಕಳಿಗೆ ಮಾನದಂಡ.

ನಿನ್ನ ದೇಶದ ಬಗೆಗಿನ ಕಾಳಜಿ ಹಾಳಾಗಲಿ
ನಿನ್ನಲ್ಲಿ ದೇಶಪ್ರೇಮದ ಸರ್ಟಿಫಿಕೇಟ್ ಇದೆಯಾ?
ಅದಿದ್ದರೇನೇ ನಿನ್ನ ಕಾಳಜಿಯ ನಂಬುವುದು.

ಅನ್ನ ತಿಂದರೂ ಅನ್ಯಾಯವ ಬೆಂಬಲಿಸುವ
ಕಣ್ಣಿದ್ದೂ ಕುರುಡು ಹೊಗಳುಬಟ್ಟನಾಗುವವರ
ಮೆಚ್ಚಿಸಲು ಮಿಥ್ಯದ ಕುಂಡಿ ಮೂಸುವವರ
ಕುರಿತು ಬರೆಯಲು ಅಕ್ಷರಗಳೂ ಅಸಹ್ಯಪಡುತ್ತಿದೆ

ಅದಕ್ಕೇ ಬಲವಂತದ ಅಷ್ಷಿಷ್ಟು ಅಕ್ಷರಗಳ ಎತ್ತಿ
ಮನಸ್ಸಾಕ್ಷಿಗೆ ಮೋಸ ಮಾಡುವವರ ಮುಖಕ್ಕೆ ಒಗೆದು
ಮುಗ್ಧವಾಗಿ ಜಗವ ನೋಡುವ ಹುಚ್ಚು ಬಿಡಬೇಕಿದೆ!!

-ಕಂದ

ಸುಳ್ಳನಿಗೆ

ಸುಳ್ಳುಳಗಳ ಮೆಚ್ಚಿಸುತಾ
ಕಿಸಿ ಕಿಸಿಯೆಂದು ಹೇಗೆ ಜೊತಯಾಗಲಯ್ಯಾ??
ಹಾಗೆ ಮೆಚ್ಚಿಸಬೇಕೆಂದರೆ
ಮರಣ ಸುಳ್ಳೆಂದು ಭರವಸೆ ಕೊಡು
ನಿನ್ನ ಸುಳ್ಳಾಡುವ ಸಂಘದ ಜೊತೆ ಕೈ ಜೋಡಿಸುವೆ !!

- ಕಂದ

ಕಹಿಯಿದೆ.

ಗುಂಪು ದೊಡ್ಡದೆಂದು
ಸೇರಿಕೊಂಡವನ
ಆತ್ಮಸಾಕ್ಷಿ
ಆತ್ಮಹತ್ಯೆ ಮಾಡಿತು

ಸತ್ಯ ಬರೆಯುತಿದ್ದವನ
ಮುಗ್ಧ ನಿರೀಕ್ಷೆಗೆ
ಹಾಳೆ ಲೇಖನಿಗಳು
ಮರುಕಪಟ್ಟಿತು

ಮಿಥ್ಯ ಪೊರೆದು
ಕುಣಿಯುತಿದ್ದವರ
ಸಮಾಧಿ ಗಹಗಹಿಸಿ
ನಕ್ಕಿತು

ನ್ಯಾಯಕ್ಕಾಗಿ
ಒಂಟಿಯಾದವನ ಕಂಡು
ಅನ್ಯಾಯ
ಅಸೂಯೆಪಟ್ಟಿತು.

ಅಸತ್ಯಕ್ಕೆ
ಆಸೆಪಡದವನೊಂದಿಗೆ
ಸೋಲುಗಳು
ಹೈರಾಣಾದವು

-ಕಂದ

ಸುಮ್ಮನೇ ಹೊಳೆಯೋದು.....

ಗಮ್ ಟೇಪ್ ಬಿಚ್ಚಿ
ಉದ್ದ ಅಳೆದವನು
ಬುದ್ಧಿವಂತ ಗ್ರಾಹಕ?

ಸಿಗರೇಟು ಮದ್ಯದ
ಸುಂಕದಲ್ಲಾಳುವವರ
ನೈತಿಕತೆ?

ಧೂಮಪಾನಿ
ಅಡಿಗಡಿಗೆ
ದೇಶ ಸಲಹಿದ

ಭ್ರೂಣ ಹತ್ಯೆಗೆಯ್ಯುವವರೂ
ಭ್ರೂಣದಲ್ಲೇ
ಹತವಾಗಿರುತ್ತಿದ್ದರೆ ?

ಮದುವೆಯಾದ ಕನಸು.
ಹುಡುಗಿ ಅವಳಲ್ಲ
ಆತನೀಗ ನಿದ್ರಿಸುತ್ತಿಲ್ಲ !!

ಕ್ಲಿಷ್ಟವಾಗಿ ಬರೆದವನ
ವಿಮರ್ಷಿಸಲು
ಬೆದರಿದರು

ಪುಟಗಟ್ಟಲೆ ಬರೆದ
ಅರ್ಥವಾಗದೆ
ನಿಘಂಟು ಹುಡುಕಿದ

ಹನಿಗವನವೆಂದುಕೊಂಡ
ಮಾಡರ್ನ್ ಗಾದೆಯೆಂದರು
ಕವಿಪುಂಗವರು :p

-ಕಂದ.

ಹೌದಲ್ವಾ..?

ಕೈ ನೋವಿನ ಸುಳ್ಳು
ಇನಿಯನೆದೆಯ
ಪ್ರೀತಿಯೇ ಉದ್ದೇಶ

ಬುದ್ಧಿ ಮಡಚಿ
ಅಡಗಿಸಿಟ್ಟ
ನಲ್ಲೆಯೆದೆಯ ತ್ರಪ್ತಿಗಾಗಿ

ಪ್ರೇಮ ಕವಿಯು
ಮುಕ್ಕಾಲು ಪಾಲು
ಸುಳ್ಳು ಹೇಳಿದ

ಸಿಗರೇಟು
ಉದಾಹರಣೆ ಸಮೇತ
ಎಚ್ಚರಿಕೆ ನೀಡಿ
ಬೂಧಿಯಾಗುತಿತ್ತು....!!!

-ಕಂದ.

ಸುಮ್ಮನೇ ಹೊಳೆಯೋದು.....

ಗಮ್ ಟೇಪ್ ಬಿಚ್ಚಿ
ಉದ್ದ ಅಳೆದವನು
ಬುದ್ಧಿವಂತ ಗ್ರಾಹಕ?

ಸಿಗರೇಟು ಮದ್ಯದ
ಸುಂಕದಲ್ಲಾಳುವವರ
ನೈತಿಕತೆ?

ಧೂಮಪಾನಿ
ಅಡಿಗಡಿಗೆ
ದೇಶ ಸಲಹಿದ

ಭ್ರೂಣ ಹತ್ಯೆಗೆಯ್ಯುವವರೂ
ಭ್ರೂಣದಲ್ಲೇ
ಹತವಾಗಿರುತ್ತಿದ್ದರೆ ?

ಮದುವೆಯಾದ ಕನಸು.
ಹುಡುಗಿ ಅವಳಲ್ಲ
ಆತನೀಗ ನಿದ್ರಿಸುತ್ತಿಲ್ಲ !!

ಕ್ಲಿಷ್ಟವಾಗಿ ಬರೆದವನ
ವಿಮರ್ಷಿಸಲು
ಬೆದರಿದರು

ಪುಟಗಟ್ಟಲೆ ಬರೆದ
ಅರ್ಥವಾಗದೆ
ನಿಘಂಟು ಹುಡುಕಿದ

ಹನಿಗವನವೆಂದುಕೊಂಡ
ಮಾಡರ್ನ್ ಗಾದೆಯೆಂದರು
ಕವಿಪುಂಗವರು :p

-ಕಂದ.

ಜನ ವಿಚಿತ್ರವಾಗಿ ಆಡುವಾಗ....

ನೀವ್ಯಾಕೆ ಹೀಗೆ?
ಸಭ್ಯತೆಯ ಪೇಟೆಂಟು ಪಡೆದಂತೆ
ಲೋಕವೆಲ್ಲ ನಿಮ್ಮ ಒಕ್ಕಲಿನವರಂತೆ
ನಿಮ್ಮದೆಲ್ಲವು ಸಹನೀಯ
ಮಿಕ್ಕವರೆಲ್ಲರು ಪ್ರಶ್ನಾರ್ಹವೆಂಬಂತೆ?

ನನ್ನೊಳಗೆ ಭಾವನೆಗಳ ಏರಿಳಿತವಿದೆ
ಕ್ರೋಧವಿದೆ,ಪ್ರೀತಿಯಿದೆ,ಪ್ರಶ್ನೆಯಿದೆ
ಕುಹಕವಿದೆ,ತುಡಿತ,ಮಿಡಿತ,ಹತಾಶೆ,ಅನುಕಂಪ
ದೂಡಿದರೂ ಕಾಲಿಗಡರುವ ಅಸೂಯೆ
ಜೇಬು ಸವೆಸುವ ಹಾಳು ಅಂತಕರಣ
ಲೋಳೆ ಸಿಂಬಳವೆಲ್ಲವೂ ಇದೆ
ಮುಖವಾಡವೊಂದು ನಿಮ್ಮಲ್ಲಿ ಉಳಿದರೆ
ನನ್ನ ದುರಾದ್ರಷ್ಟವಾಯಿತೇ.....??

ಅಲೆಮಾರಿಯೊಳಗೆ ಚಿಂತನೆಯಿಲ್ಲವೆಂದೇ?
ಕಿವಿಕೊಟ್ಟರೆ ದೊಡ್ಡತನಕೆ ಅವಮಾನವೆಂದೇ?
ಕಂಡವರು ದೊಡ್ಡವರಿಗೆ ಚಾಡಿಗೈವರೆಂದೇ?
ದೊಡ್ಡವರ ಕಾರು ಇರುಳಲ್ಲಿ ಕಂಪಿಸುತ್ತಿದ್ದಿದು
ನಾನ್ಯಾರಿಗೂ ಹೇಳಲಿಲ್ಲ,ಹೇಳಲಾರೆ
ಕಾರಿನೊಳು ಕಣ್ಣೀರಿಟ್ಟವಳ ನೆನೆದು ತುತ್ತು ತ್ಯಜಿಸಿದ್ದೆ
ಕಂಬಳಿಯ ಎತ್ತೆತ್ತಿ ನಲಕ್ಕೊದ್ದಿದ್ದೆ,ನೆಲವ ಪರಚಿದ್ದೆ
ಮುಖವಾಡವೊಂದು ನಿಮ್ಮಲ್ಲಿ ಉಳಿದರೆ
ನನ್ನ ದುರಾದ್ರಷ್ಟವಾಯಿತೇ.....??

-ಕಂದ

ಹಿಂಗೆಲ್ಲಾ ಅನಿಸ್ತಿತ್ತು

ಅವಳು ಕಾಲಿಡುವ
ಕಾಲೇಜಿನ ಮೆಟ್ಟಿಲುಗಳು
ಕೆಸರು ತುಂಬಿದೆ, ಪಾಚಿಗಟ್ಟಿವೆ.
ಆ ಕೆಸರು ಪಾಚಿಯನೆಲ್ಲ ಕಿತ್ತು
ಬಣ್ಣ ಬಳಿಯಬೇಕೆನಿಸಿದ್ದು
ಯಾವ ಬಗೆಯ ಪ್ರೀತಿ???

-ಕಂದ

ಫಲ್ಘುನಿಯ ತೀರ ಮನ ಸೆಳೆವಾಗ ....

ನೀ ಬಸ್ಸು ಕಾಯಲು ಕೂರುತಿದ್ದ
ಕಲ್ಲುಹಾಸನೊಮ್ಮೆ ತಡವಿದೆ
ಹುಣಸೆ ಮರವು ನೆರಳು ಕೊಟ್ಟು
ತಲೆ ತಡವಿತು.
~~
ನನ್ನ ಕನಸಿನ ಹುಡುಗಿಗೆ
ಗಂಡುಮಗುವಂತೆ
ನನ್ನ ಹೆಸರಿಡಬೇಡ
ಎಕ್ಕುಟ್ಟು ಹೋದಾನು
~~
ಹೊಟ್ಟೆ ತೊಳಸಿದರೆ
ಏನೇನಾಗುತ್ತೋ...??
ಹ್ರದಯ ತೊಳಸಿದಾಗ
ಅಕ್ಷರಗಳುದುರುತ್ತದೆ
~~
ನಿನ್ನ ಹೆಸರಿನ ವಿಷ ಕುಡಿದು
ಸಾವೇ ಬರುತ್ತಿಲ್ಲ
ಬದುಕೋಣವೆಂದರೆ
ನಿನ್ನ ಹೆಸರೇ ವೈರಿ
~~
ಸುಮ್ಮನೆ ಮಜ ನೋಡಲು
ಸೋಲು ಸುಳ್ಳೆಂದ ಛಲಗಾರನೇ ಬೇಕಿತ್ತಾ?
ನೀ ಸಾಧಿಸಿದ್ದೇನು...?
ಸೋಲೊಪ್ಪಿಸಿದ್ದಾ......???
~~
ಕಿಲಕಿಲ ನಗುತ್ತೇನೆ
ಎಲ್ಲರೊಳು ಬೆರೆಯುತ್ತೇನೆ
ನಿನ್ನ ನೆನಪಾದರೆ ಸಾಕು
ಏಕಾಂತವೇ ಬೇಕು
ಅಲ್ಲೇ ಕೊಳೆಯಬೇಕು...!!!!!

-ಕಂದ.

ನನ್ನ ಯೋಚನೆಗಳು.....

ಮದರಸದಲ್ಲಿ ನನಗೆ
ದೇಶದ್ರೋಹವನ್ನು ಕಲಿಸಿರುತ್ತಿದ್ದರೆ
ಆ ಮೌಲ್ವಿಯ ರುಂಡದೊಂದಿಗೆ
ಹೊರನಡೆಯುತ್ತಿದ್ದೆ

ಮಸೀದಿಯಲ್ಲಿ ನನಗೆ
ಪಂಕ್ತಿ ಭೇಧವನ್ನು ಮಾಡಿರುತ್ತಿದ್ದರೆ
ಶ್ರೇಷ್ಟವಾದುದೆಂದು ಹುಟ್ಟಿರುವ
ನಮ್ಮೊಳಗಿನವರ ಪಂಗಡಗಳ
ನಂಬಿಬಿಡುತ್ತಿದ್ದೆ.

-ಕಂದ

ಎರಡು ದಿನದ ಮುಂಗೋಪಿ ಗೆಳತಿಗೆ....

ಕಡುಗಪ್ಪು ದಟ್ಟ ಕೇಶಗಳ
ನಡು ನಡುವೆ ಬಿಳಿಕೂದಲು
ಇರುಳಾಗಾಶದಿ ನಕ್ಷತ್ರ ಹೊಳೆದಂತೆ
ಕೀಳದಿರದನ ಕಸ್ತೂರಿ ಸುಂದರಿಯೆ.

ಜಗಕೆಲ್ಲ ಕಾಡಿಗೆಯ
ನಿನ್ನ ಕಣ್ಣುಗಳೇ ಹಂಚುವುದಾ?
ಕಾರ್ಮುಗಿಲಿನಂತವುಗಳಿಗೆ
ಕಾಡಿಗೆಯ ಹಂಗಿದೆಯಾ?

ಸೌಂದರ್ಯ ಬಿದ್ದಿದ್ದು
ನಿನ್ನ ಮೂಗು ತುದಿ ಮೇಲಾ?
ಅಲ್ಲಿಂದಲೆ ಭೂವಾಸಿಗಳು
ಕೈಯೊಡ್ಡಿ ಪಡೆದಿದ್ದಾ ?

ನಿನ ಕುರಿತು ಹೇಳೋದು
ಹುಬ್ಬುಗಳ ಕೆಲಸಾನ?
ನಿನ್ನ ಮುಗ್ಧ ನೋಟಗಳು
ನಿನ್ನೆದೆಯ ಪ್ರತಿನಿಧಿಯಾ?

ಮುಂಗೋಪ ಅಡಗಿಸಲು
ತುಟಿ ಮುಚ್ಚಿ ಕೂರೋದ?
ಬಾಯ್ಬಿಡಲು ಕಾಡಿದರೆ
ಮಗುವಷ್ಟು ಚಿರಿಪಿರಿಯಾ?

ನೀನ್ಯಾರೋ ಕೇಳ್ಬೇಡ ನಾ ದಾರೀಲಿ ಹೋಗೋನು
ಈ ಲೋಕ ಸರಿಯಿಲ್ಲ ಎಚ್ಚರದಿ ಮನೆ ಸೇರು.                  ಮುಂದೊಂದು ಬೆಳಗಿನಲಿ ಶ್ರೀಮಂತ 'ಮನ' ಸೇರು:)

-ಕಂದ

ಸಿಗ್ನಲ್ಗಳಲ್ಲಿ ಬರೆದಿದ್ದು....

ನನ್ನ ಪ್ರಶ್ನೆಗಳಿಗುತ್ತರಿಸುವ
ವ್ಯವಧಾನವಿಲ್ಲದವರು
ನಾ ಕಲ್ಪಿಸಿಕೊಂಡ ಉತ್ತರಗಳ
ಪ್ರಶ್ನಿಸಿದರು.
~~
ಸಿಗ್ನಲ್ ಗಳಲ್ಲಿ ಕೈ ಚಾಚುವ ಪುಟ್ಟ ಜೀವಗಳು.
ನೀಡಿದರೆ ವಿದ್ಯೆಯಿಂದ ವಂಚಿಸಿದ ಪಾಪಿಯೋ?
ನೀಡದಿದ್ದರೆ ಆ ಕಣ್ಣುಗಳಲ್ಲಿನ ಹಸಿವಿನ ತೋಡಿಕೆಗೆ ಕುರುಡಾದ ಹ್ರದಯಹೀನನೋ?
ದೇವನೇ ಇದೆಂತಹ ಸಂಕಟಮಯ ಸನ್ನಿವೇಶ?
~~
ಸತ್ಯ ಹೇಳುವವರನ್ನೆಲ್ಲ ಅನ್ಫ್ರೆಂಡ್ ಮಾಡಿದರೆ
ದುಷ್ಟ ಸ್ನೇಹಿತರ ಕೂಟ?
ಅಥವಾ ಎರಡು ಮುಖದವರ ಸಹವಾಸ???
~~
ಆತ ಮೊದಲು ಡೇರೆ ಕಟ್ಟಿ ಮಾವಿನ ಹಣ್ಣಿಟ್ಟಿದ್ದು
ಮೂಸಂಬಿಯವ,ಸೇಬಿನವ,ಬಾಳೆ,ಸಪೋಟದವರೆಲ್ಲ
ಅವನ ನೋಡಿ ಅಕ್ಕಪಕ್ಕ ಬಂದು ಇಟ್ಟವರು
ಈಗಲ್ಲಿ ನಿತ್ಯ ಜನಜಂಗುಳಿಯ ಹಣ್ಣಿನ ಸಂತೆ
ವಾವ್ ಒಬ್ಬನ ಕನಸು ಎಷ್ಟೊಂದು ಜನರ ತುತ್ತು?
~~
ಬಿಸಿಲಿಗೆ ಹಿಡಿಶಾಪವಿಡುತ್ತಿದ್ದವರ ನಡುವೆ
ಆತನೊಬ್ಬ ಗಡಿಗಡಿಗೆ ಸ್ತುತಿಸುತ್ತಿದ್ದ
ತನ್ನಷ್ಟಕೆ ಮುಗುಳ್ನಗುತಿದ್ದ.
ಜ್ಯೂಸು ವ್ಯಾಪಾರಿ ಇರಬಹುದೇ???

-ಕಂದ.

ಗೌರಮ್ಮನ ಗೌರವಕೆ.....

ಲಂಗ ದಾವಣಿ,
ನೀಳ ಜಡೆ,ಬೇಲಿ ಹೂವು,
ಕಾಡಿಗೆಯ ಕಣ್ಣು
ಗಾಂಭೀರ್ಯದ ಹೆಜ್ಜೆಯವಳಿಗೆ
ಸಡ್ಡುಹೊಡೆಯಲೊರಟವಳದೊಂದು
ಅರ್ಧ ಚಡ್ಡಿ,ಬಾಬ್ ಕಟ್ಟು
ಲಿಪ್ಪು ಸ್ಟಿಕ್ಕು,ಎಕ್ಕುಟ್ಟು
ಥೂ.... !!!

ಅದೇನು ಬಟ್ಟೆಯೋ
ಬಟ್ಟೆಯಿದೆಯೋ ಇಲ್ಲವೋ
ದೇಹಕಿಟ್ಟೇ ಹೊಲಿಸಿದ್ದೋ
ಮೈಗೇ ಬಣ್ಣ ಬಳಿದಿದ್ದೋ???
ಸನ್ಯಾಸಿ ಗುಂಡಿಗೆಯೂ
ಕ್ಷಣಕಾಲ ಕದಲೀತು !!!

ಮಾವಿನ ಮರದ ಮರೆಯೊಳು
ಅವಿತಿದ್ದು ಕಣ್ತುಂಬಿದ
ಮೈ ಪೂರ್ತಿ ಬಟ್ಟೆಯವಳು
ಮದರಂಗಿ ಹೊತ್ತವಳು
ಗಢ ಗಢ ನಡುಗಿಸಿದ್ಳು
ಎಂಟೆದೆಯ ಬಂಟನನ್ನೂ!!

ತುಟಿಯಲ್ಲಿ ಕಣ್ಣಲ್ಲಿ ಅಲ್ಲಲ್ಲಿ ಎಲ್ಲೆಲ್ಲೋ
ಹೆಂಗೆಂಗೋ ಜೋತಾಡೊ
ಮೂರ್ ಕೆ.ಜಿ ಕಬ್ಬಿಣ,ಡಂಬಲ್ಸೇ ಇರ್ಬೇಕು
ಮೈಯೆಲ್ಲ ಕ್ಯಾನ್ವಾಸು ಬೋರ್ಡಂತೆ
ಚಿತ್ರವಿಚಿತ್ರ ಭಯ ಬೀಳಿಸೊ ಚಿತ್ರಣ.ಇವಳವತಾರಕೆ
ಎಂಟೆದೆಯ ಬಂಟನೂ ಊರ್ಬಿಟ್ಟು ಓಡಿಯಾನು

ಐದು ರೂಪಾಯಿ ಮಡಗ್ಬಿಟ್ಟು
ಪಾರ್ಕೊಳಗೆ ತೂರ್ಕೊಂಡ್ರೆ
ಐದು ನಿಮಷಕೇ ಹೊರದಬ್ಬುವ
ತರಹೇವಾರಿ ಅಸಹ್ಯಗಳು
ಅವರವರ ಸ್ವಾತಂತ್ರ್ಯ ಕೇಳೇಕೊ ನಾವ್ಯಾರು?
ನಮ್ ಸ್ವಾತಂತ್ರ್ಯದ ಕಥೆ ಮಾತ್ರ ಗಾಂಧೀಜಿಗೇ ಪ್ರೀತಿ.

ಚೂಡಿ ಉಟ್ಟವಳು,ಹಣೆ ಬೊಟ್ಟು ಇಟ್ಟವಳು,
ತಲೆ ತಗ್ಗಿಸಿ ನಡೆದವಳ ಗೌರವಿಸಿದ ಅಭಿಮಾನ
ಓರೆಗಣ್ಣಿನ ಕೆಂಡಕ್ಕೆ
ಚಡಪಡಿಸಿ ಕಾಲ್ಕಿತ್ತ ಪರಿಯೇ ಅಪ್ಯಾಯಮಾನ

ನಿನ್ ತಾಯಿ ಬೇರಿಂದ ಕಳಚಿರುವ ಹೆಣ್ಣೇ
ನರಿ ತೋಳಗಳು ಬಂದಾವು ನಿನ್ನಾಹ್ವಾನಕೆ
ನೀನವರಿಗೆ ಸರಕಷ್ಟೇ ವ್ಯಾಪಾರ ಮಾಡೋರ್ಗೆ
ಗೌರಮ್ಮನ ಗೌರವಿಸಿದ ನೂರಾರು ಮನಸುಗಳಲಿ
ನಿನಗ್ಯಾವ ಜಾಗವಿದೆ?
ಮರುಕವಿದೆ ನೀನಿನ್ನನೇ ಕೊಲ್ಲುವುದಕೆ.
ಸೂತ್ರದ ಗೊಂಬೆಯಂತೆ ಮುಗ್ಧಳಾಗಿ ಕುಣಿಯುವುದಕೆ

ಮಹಿಳಾ ಮಣಿಗಳೇ ಏನಾರ ಉಟ್ಕೊಳ್ಳಿ
ನನಗನಿಸಿದ್ದು ಹೇಳಿದ್ದು ಕಂಪ್ಲೇಂಟು ಕೊಡ್ಬೇಡಿ...

-ಕಂದ

ಗೌರಮ್ಮನ ಗೌರವಕೆ.....

ಲಂಗ ದಾವಣಿ,
ನೀಳ ಜಡೆ,ಬೇಲಿ ಹೂವು,
ಕಾಡಿಗೆಯ ಕಣ್ಣು
ಗಾಂಭೀರ್ಯದ ಹೆಜ್ಜೆಯವಳಿಗೆ
ಸಡ್ಡುಹೊಡೆಯಲೊರಟವಳದೊಂದು
ಅರ್ಧ ಚಡ್ಡಿ,ಬಾಬ್ ಕಟ್ಟು
ಲಿಪ್ಪು ಸ್ಟಿಕ್ಕು,ಎಕ್ಕುಟ್ಟು
ಥೂ.... !!!

ಅದೇನು ಬಟ್ಟೆಯೋ
ಬಟ್ಟೆಯಿದೆಯೋ ಇಲ್ಲವೋ
ದೇಹಕಿಟ್ಟೇ ಹೊಲಿಸಿದ್ದೋ
ಮೈಗೇ ಬಣ್ಣ ಬಳಿದಿದ್ದೋ???
ಸನ್ಯಾಸಿ ಗುಂಡಿಗೆಯೂ
ಕ್ಷಣಕಾಲ ಕದಲೀತು !!!

ಮಾವಿನ ಮರದ ಮರೆಯೊಳು
ಅವಿತಿದ್ದು ಕಣ್ತುಂಬಿದ
ಮೈ ಪೂರ್ತಿ ಬಟ್ಟೆಯವಳು
ಮದರಂಗಿ ಹೊತ್ತವಳು
ಗಢ ಗಢ ನಡುಗಿಸಿದ್ಳು
ಎಂಟೆದೆಯ ಬಂಟನನ್ನೂ!!

ತುಟಿಯಲ್ಲಿ ಕಣ್ಣಲ್ಲಿ ಅಲ್ಲಲ್ಲಿ ಎಲ್ಲೆಲ್ಲೋ
ಹೆಂಗೆಂಗೋ ಜೋತಾಡೊ
ಮೂರ್ ಕೆ.ಜಿ ಕಬ್ಬಿಣ,ಡಂಬಲ್ಸೇ ಇರ್ಬೇಕು
ಮೈಯೆಲ್ಲ ಕ್ಯಾನ್ವಾಸು ಬೋರ್ಡಂತೆ
ಚಿತ್ರವಿಚಿತ್ರ ಭಯ ಬೀಳಿಸೊ ಚಿತ್ರಣ.ಇವಳವತಾರಕೆ
ಎಂಟೆದೆಯ ಬಂಟನೂ ಊರ್ಬಿಟ್ಟು ಓಡಿಯಾನು

ಐದು ರೂಪಾಯಿ ಮಡಗ್ಬಿಟ್ಟು
ಪಾರ್ಕೊಳಗೆ ತೂರ್ಕೊಂಡ್ರೆ
ಐದು ನಿಮಷಕೇ ಹೊರದಬ್ಬುವ
ತರಹೇವಾರಿ ಅಸಹ್ಯಗಳು
ಅವರವರ ಸ್ವಾತಂತ್ರ್ಯ ಕೇಳೇಕೊ ನಾವ್ಯಾರು?
ನಮ್ ಸ್ವಾತಂತ್ರ್ಯದ ಕಥೆ ಮಾತ್ರ ಗಾಂಧೀಜಿಗೇ ಪ್ರೀತಿ.

ಚೂಡಿ ಉಟ್ಟವಳು,ಹಣೆ ಬೊಟ್ಟು ಇಟ್ಟವಳು,
ತಲೆ ತಗ್ಗಿಸಿ ನಡೆದವಳ ಗೌರವಿಸಿದ ಅಭಿಮಾನ
ಓರೆಗಣ್ಣಿನ ಕೆಂಡಕ್ಕೆ
ಚಡಪಡಿಸಿ ಕಾಲ್ಕಿತ್ತ ಪರಿಯೇ ಅಪ್ಯಾಯಮಾನ

ನಿನ್ ತಾಯಿ ಬೇರಿಂದ ಕಳಚಿರುವ ಹೆಣ್ಣೇ
ನರಿ ತೋಳಗಳು ಬಂದಾವು ನಿನ್ನಾಹ್ವಾನಕೆ
ನೀನವರಿಗೆ ಸರಕಷ್ಟೇ ವ್ಯಾಪಾರ ಮಾಡೋರ್ಗೆ
ಗೌರಮ್ಮನ ಗೌರವಿಸಿದ ನೂರಾರು ಮನಸುಗಳಲಿ
ನಿನಗ್ಯಾವ ಜಾಗವಿದೆ?
ಮರುಕವಿದೆ ನೀನಿನ್ನನೇ ಕೊಲ್ಲುವುದಕೆ.
ಸೂತ್ರದ ಗೊಂಬೆಯಂತೆ ಮುಗ್ಧಳಾಗಿ ಕುಣಿಯುವುದಕೆ

ಮಹಿಳಾ ಮಣಿಗಳೇ ಏನಾರ ಉಟ್ಕೊಳ್ಳಿ
ನನಗನಿಸಿದ್ದು ಹೇಳಿದ್ದು ಕಂಪ್ಲೇಂಟು ಕೊಡ್ಬೇಡಿ...

-ಕಂದ

ನನಗನಿಸಿದ್ದು....

ಅಮ್ಮನಿಗೆ ಗುಮ್ಮ ಬಂದರೆ
ಸುಮ್ಮನಿರುವುದೇ ಲೇಸು
ಮಗರಾಯ :)

ಅಮ್ಮ ಬೈದರೂ ಬೇಜಾರು
ಬೈಯದಿದ್ದರೂ ಬೇಜಾರು
ಅಮ್ಮಾ ನಿಂದೊಳ್ಳೆ ಮ್ಯಾಜಿಕ್ಕು:)

ದಂಡ ಪರಿಷ್ಕರಣೆಯೆಂದೊಡೆ
ಮೀಸೆಯಡಿಯಲ್ಲಿ ನಕ್ಕ
ಲಂಚಮಾಮ.

ಲಂಚ ಕೀಳುವಾಗ ಅಸಹ್ಯವೆನಿಸುತ್ತದೆ
ಧೂಳು ಬಿಸಿಲಲ್ಲಿ ಬೇಯುವುದ ಕಂಡರೆ
ಅನುಕಂಪವಾಗುತ್ತದೆ
ನಂದೊಂದು ವಿಚಿತ್ರ ಹ್ರದಯ.

ಮಧ್ಯಪಾನವ ಹೊಗಳುವ
ಕವನದ ಮೇಲೆ
"ಶಾಸನ ವಿಧಿಸಿದ ಎಚ್ಚರಿಕೆ" ಬೇಡ್ವಾ??
ನಮ್ದೊಳ್ಳೆ ಕಾನೂನು.

ಫೇಸ್ಬುಕ್ ಹೋರಾಟಗಾರನಿಗೆ
ವಿರೋಧಿಗಳು
ನೆಟ್ ಪ್ಯಾಕ್ ಆಫರ್ ಕೊಟ್ರಂತೆ
ಪೋಸ್ಟ್  ಡಿಲೀಟ್ ಡೀಲ್ ಅಂತೆ !!!

-ಕಂದ.

ಫಲ್ಘುನಿಯ ತೀರದೊಳು

ನಿನ್ನೂರಿಗೆ ಹರಿಯುವ
ಫಲ್ಘುನಿಯ ನೀರಾಗಿ
ನಿನ ಮುದ್ದು ಪಾದಗಳಿಗೆ
ಮುತ್ತಿಕ್ಕುವಾಸೆ

ನಿನ್ನಂಗೈಯು ತಬ್ಬುವ
ಸಾಬೂನು ಬಿಲ್ಲೆಯೂ
ನಾನಾಗುವಾ ಆಸೆ

ಎತ್ತೆತ್ತಿ ಒಗೆಯುವ
ಆ ಬಟ್ಟೆಗಳ ಭಾಗ್ಯವ
ನನದಾಗಿಸಿ ಬಿಡು
ನನ ಜನ್ಮವೆಲ್ಲ ಖುಷಿಯೇ

ಮಣಭಾರ ಬಟ್ಟೆಗಳ
ಹೊರಲಾಗದ ನಡುಗಳಿಗೆ
ನನ್ನ ಕೂಲಿಯಾಗಿಸಿಕೊ
ನಿಯ್ಯತ್ತಿಗೆ ತಲೆಬಾಗುವೆ ನೀ

ಊರ್ಗುಂಟ ಹಾದಿಯಲಿ
ನಿನ ಕಾಡುವ ಪಡ್ಡೆಗಳ
ಮುಖ ಮೂತಿ ಒಡೆಯೋಕೆ
ನನಗೊಬ್ಬನಿಗೇ ಅನುಮತಿಸು

ಫಲ್ಘುನಿಯ ತೀರದೊಳು
ಏಕೈಕ ಮಲ್ಲಿಗೆಯೆ
ಬಾಡದೇ ಕಾಪಿಡುವೆ
ನನ್ನೆದೆಯ ತಂಪಿನೊಳು

ಈ ಮುದ್ದು ಪ್ರೀತಿಯನು
ಬೊಗಳೇಂತ ಹೇಳದಿರು
ನನ್ನವ್ವಳೂ ಅಳುತಾಳೆ
ನಾ ತುತ್ತುಣ್ಣದೆ ಕುಳಿತಾಗ
ಮರೆಯಲ್ಲಿ ಅಳುವಾಗ! !

-ಕಂದ

ನನ್ನದೊಂದು ನಶೆ.... !!!

ನಾ ಕುಡಿದಿಲ್ಲ ಕುಡಿಯಲ್ಲ ,
ನಿನ್ನ ನಶೆಯನ್ನು ಮದಿರೆಗೆ ಹೋಲಿಸಿದರೆ
ಹಸಿ ಹಸಿ ಸುಳ್ಳಾದೀತು
ನನ್ನೊಳಗಿನ ನಶೆಯ ಅಗುಲಿನ ಹರಿತ
ಅನುಭವಿಸಲಾಗದವಳಿಗೆ
ಶಬ್ಧಗಳೇನು ಹೇಳುವುದು ಮಣ್ಣು?

ಗಿಜಿಗಿಜಿ ಜನಜಂಗುಳಿಯೊಳು
ನಿನ್ನ ನೆನೆತರೆ ನಶೆಗೆ ಅಪಮಾನ
ಏಕಾಂತದ ಕಡು ಮೌನದೊಳು ಮಾತ್ರ
ನಿನ್ನ ನಶೆಯನ್ನು ಮೆದುಳು ಹ್ರದಯದ
ಇಂಚಿಂಚಲಿ ಅನುಭವಿಸಬಲ್ಲೆ.
ನಿನ್ನ ನಶೆಯೇರಿಸಿ ಕುಳಿತ ನನ್ನ ಕಡಿದರೆ
ಕಾಳಿಂಗ ಸರ್ಪಕ್ಕೂ ಸಾವು ಖಚಿತ.

ಮದಿರೆಯನ್ನು ಹೊಗಳಿ ನಡೆಯುವವನಿಗೆ ಕೇಳಿಸಿಬಿಟ್ಟರೆ ಭಯ
ನನ್ನ ನಶೆಯೊಳು ಪಾಲು ಕೇಳಿಯಾನು
ನೀಡದಿದ್ದರೆ ಕುತ್ತಿಗೆ ಹಿಸುಕಿ ಅಪಹರಿಸಿಯಾನು
ಮದಿರೆ ನಶೆಯೆಂಬುದು ಸುಳ್ಳೆಂದು
ಬೊಬ್ಬಿರಿದು ಪ್ರಮಾಣ ಮಾಡಿಯಾನು

ಚಂದಿರನೂ ಪುಸಲಾಯಿಸಲಿಲ್ಲವೇ
ಕಾಳ ರಾತ್ರಿಯ ಪಶ್ಚಿಮದ ಕ್ರೂರ ಗಾಳಿಯ ಜೊತೆಗೂಡಿ??
ನಶೆಯನ್ನು ವರ್ಗಾಯಿಸಿ ಬಿಡು ಎನಗೆ
ನೂರಾರು ಕಾಲಕ್ಕೂ ಋಣಿಯಾಗುವೆನೆಂದು...
ಉರಿದು ಕರಗುತಿದ್ದ ಮೇಣದ ಬತ್ತಿಗಳೇ ಸಾಕ್ಷಿ,
ಹರಿದು ಬಿಸುಟ ಕಣ್ಣೀರಲಿ ನೆನೆದ ಹಾಳೆಗಳೇ ಸಾಕ್ಷಿ ...
ಬಿಕ್ಕಳಿಕೆಯ ತಡೆಯಲೆತ್ನಿಸಿದ ಅಂಗೈಯೇ ಸಾಕ್ಷಿ...

ಗೋರ್ಗಲ್ಲಿನಂತ ನಿನ್ನೆದೆಗೆ ತಲುಪದ
ಅಕ್ಷರಗಳಿಗ್ಯಾವ ಅರ್ಹತೆ
ನನ್ನೊಳಗಿನ ನಶೆಯ ಕಾಠಿನ್ಯ ವರ್ಣಿಸಲು...
ಶಬ್ಧಗಳಿಗೆ ಧೈರ್ಯವಿದ್ದರೆ ಬಾಜಿ ಕಟ್ಟುವೆ,
ವರ್ಣಿಸದು ಜನ್ಮದಲ್ಲೆಂದೂ
ಅರ್ಥೈಸಿಕೊಳ್ಳಬಲ್ಲೆನೆಂಬವನು ಮಹಾ ಸುಳ್ಳ
ನನ್ನವಳ ದ್ರೋಹವರಿಯದವನು.

-ಕಂದ

Thursday, September 25, 2014

ಹೆಸರಿಲ್ಲದ ಹನಿಗಳು

ಬೆಂಗ್ಳೂರಿನ ಬಹುಪಾಲು
ಆಟೋ ಮೀಟರ್ ತಿರುಗೋದು
ನಿಮಗೆ ಮೀಟರ್ ಇದ್ದರೆ ಮಾತ್ರ
~~
ಇಲ್ಲೊಬ್ಬಳು ಮಹಾ ಮೋಸವ
ಮಾಡಿರುವಳು,
ಮಹಿಳಾ ಸಂಘಟನೆಗೆ ದೂರು ಕೊಡಬಹುದಾ?
~~
ನನ್ನದೇ ಸಾಲುಗಳೆಂದು ಅಭಿಮಾನಿಸುವಾಗಲೇ
ಯಾವನಾದ್ರೂ ಬರೆದ್ಬಿಟ್ಟವನಾ
ಅಂತ ಅನುಮಾನ
~~
ಮಂಚದ ಕೆಳಗೆ ನೂರಾರು ಪ್ರೇಮ ಪತ್ರ
ಎಕ್ಸಾಮು ಬುಕ್ಕೆಂದು ಎತ್ತಿಟ್ಟ ಅಮ್ಮನ ಮುಗ್ಧತೆ
ಇಂದಿಗೂ ಇರಿಯುತ್ತದೆ
~~
ಜಾತಿ ಹೆಸರಲ್ಲಿಯೇ ನಮ್ಮನ್ನು ದೋಚಿದ್ದು
ಇಂದಿಗೂ ಮೂರ್ಖರಾಗಿರುವ ನಮಗೆ
ಬ್ರಿಟೀಷರ ಬಗ್ಗೆ ಎಳ್ಳಷ್ಟೂ ಕ್ರೋಧವಿಲ್ಲ,
ಸ್ವಾಭಿಮಾನ,ಲಜ್ಜೆಯಿಲ್ಲ.
~~
ನಾ ಅಕ್ಷರಗಳ ಬಳಸಿದ್ದು,ಭರ್ಚಿಯಲ್ಲ
ಇರಿದಂತಾಗುವುದಾದರೆ
ನಿಮಗಿರುವ ಅರ್ಹತೆ
~~
ಎಸಿ ಕೋನೆಯ ಹೊಗಳಬೇಡ
ನನ್ನನ್ನೂ ಕರೆಯಬೇಡ
ನಾ ಅರಳೀ ಮರದಡಿಯಲ್ಲಿ ಬೆಳದವನು
~~
ನನ್ನ ಮಿತಿಯಲ್ಲಿ ಬಂಧಿಸಬೇಡಿ
ನನ್ನ ಚಿಲ್ಲರೆ ಕವನಗಳು
ಅನ್ಯಾಯವಾಗಿ ಸಾಯುತ್ತದೆ.
-ಕಂದ

ಅಮ್ಮ ನೆನಪಾಗುವ ಹೊತ್ತು

ಏನೆಲ್ಲ ಬರೀತೀನಿ
ನಿನ್ ಬಗ್ಗೆ ಬರೆಯಲ್ಲ
ನೀನನ್ನ ಕೇಳಲ್ಲವೆಂಬ
ಅಸಡ್ಡೆಯಲ್ವಾ ನಂಗೆ.. ??
ಹಃ ಹಃ ಅಮ್ಮಾ..
ನೆನ್ನೇನು ಹೇಳ್ದ್ಯಂತೆ ನಮ್ಮಪ್ಪನಿಗೆ,
ನಾ ನಿಂಗೆ ಫೋನು ಮಾಡಿದ್ದೆನಂತ
ಎಂತ ಸುಳ್ಳುಗಾತಿ ನೀನು?
ಹಃ ಹಃ ಹಃ
ಅದಿರಲಿ
ಮನೆ ಬದಿಯ ಓಣಿಯಲಿ
ನಾ ಬೀಡಿ ಹಚ್ಚಿದ್ದು
ನೀ ಹೇಳಿಲ್ಲವಂತೆ ಅಪ್ಪನಿಗೆ?
ನಾ ಸರಿಯಾಗುವೆನೆಂಬ ವಿಶ್ವಾಸವಿತ್ತಾ?
ನೀ ಕಾಸು ಕೊಡದಾಗ ಹುಡುಕಾಡಿ ಸಿಗದಾಗ
ನಾ ಕನ್ನಡಿಗೆ ಬಡಿದಿದ್ದು ಬೆಕ್ಕಿನ ತಪ್ಪೆಂದು
ಹೆಂಚುಗಳ ಒಡೆದಿದ್ದು ತೆಂಗಿನಮರವೆಂದು
ಊಸಿ ಬಿಟ್ಟಿದ್ಯಂತೆ,ಅಪ್ಪ ನಂಬಿದ್ರಂತೆ,
ನಿನಗೊಂಚೂರೂ ಮನಸಾಕ್ಷಿಯಿಲ್ವ?
ಜ್ವರ ಬಂದು ಅತ್ತಾಗ ಪ್ರಜ್ನೆಯಿಲ್ಲದೆ ಬಿದ್ದಾಗ
ಇರುಳೆಲ್ಲ ತಲೆ ಹತ್ರ ಕೂತ್ಬಿಟ್ಟು ಗಳಾ ಗಳಾ ಅಳ್ತಿದ್ದೆ
ಕಣ್ಣೀರು ಮುಖಕ್ ಬಿದ್ದು ಕಿರಿಕಿರಿಯಾಗಿತ್ತು
ನಿನಗೇನು ನಿದ್ರೆಯೆಂದರೆ ಅಲರ್ಜಿಯಾ?
ಊರ್ ಸುತ್ತೋಕೆ ಹೊರಟೋಣ
ಬಾಗಿಲಲಿ ಕಾದಿದ್ದು, ರಸ್ತೇಲಿ ಇಣುಕಿದ್ದು
ಅದೂ ನಡುರಾತ್ರಿಯಲ್ಲಿ ...!!!!???
ಅಬ್ಬಾ ನಿನಗೆಷ್ಟು ಧೈರ್ಯ????!!!!
ದನದಂತೆ ನನ್ನ ಬಡಿವಾಗ ಅಪ್ಪ
ಮೈಯೊಡ್ಡಿ ನಿಲ್ತಿದ್ದೆ ಅಪ್ಪನಲಿ ಬೇಡ್ತಿದ್ದೆ
ನಿನೇನು ಸೂಪರ್ ವುಮೆನ???
ನೋವಾಗ್ತಿರ್ಲಿಲ್ವಾ ಒಂಚೂರೂ ನಿನಗೆ?
ಅದೆಲ್ಲಾ ಇರಲಿ,
ಒಂದೇ ತುಂಡೆಂದು ನಾ ಅರಚಾಡಿ ಹೊರಟಾಗ
ತಡೆದ್ಬಿಟ್ಟು ಕೊಟ್ಟಿದ್ದು ನಿನ್ಪಾಲಿನದ್ದಾ?
ನಿದ್ರೆಯಿಂದ ಎಬ್ಬಿಸಿ ಬಲವಂತದಿ ಉಣಿಸಿದ್ದು
ನಿನ ಜೀವಬಲಕೆ ತಣ್ಣೀರು ಕುಡಿದಾ?
ಹೋಗು ಇಷ್ಟೇನಾ ಬರೆಯೋದೂಂತ
ತಲೆನೇವರಿಸೋಕೆ ಬರ್ಬೇಡ...
ಒದ್ದೆ ಹಾಳೆಯಲಿ ಲೇಖನಿಯು ಚಲಿಸಲ್ಲ …!!!!
-ನಿನ್ನ ಕಂದ